ಧರ್ಮಸೂತ್ರ
ಒಂದು ನದಿಯು ಆಳವಾದ ಕೊಳ್ಳದತ್ತ ರಭಸದಿಂದ ಹರಿಯುತ್ತಿತ್ತು. ಒಬ್ಬ ದಾರಿಕಾರನು ಆ ನದಿಯಲ್ಲಿ ಈಸುಬಿದ್ದ, ಹುಮ್ಮಸದಿಂದ ಮುಂದೆ ಮುಂದೆ ಹೋದ. ಸೆಳವಿಗೆ ಸಿಕ್ಕ. ಈಜಿ ಈಜಿ ಕೈಸೋತವು. ಇನ್ನೇನು ಮುಳುಗುವುದರಲ್ಲಿದ್ದ; ಅಷ್ಟರಲ್ಲಿ ಹಿರಿಯರೊಬ್ಬರು ಅಲ್ಲಿಗೆ ಆಗಮಿಸಿದರು. ಅಪಾಯದಲ್ಲಿದ್ದ ಈತನನ್ನು ಕಂಡ ಕೂಡಲೇ ಹಗ್ಗವನ್ನು ನೀರಿಗೆ ಎಸೆದು ‘ಹಿಡಿ’ ಎಂದರು. ಅದೇ ಸಮಯಕ್ಕೆ ಎಲ್ಲಿಂದಲೋ ಮರದ ತುಂಡು ಅಲ್ಲಿ ತೇಲಿ ಬಂತು; ಯಾವುದು ಹಿಡಿಯುವುದು? ಹಗ್ಗವನ್ನೋ? ಮರದ ತುಂಡನ್ನೋ? ದಾರಿಕಾರ ಮರದ ತುಂಡನ್ನೇ ಹಿಡಿದ.ಹಿರಿಯನು ಹೇಳಿದ ‘ಮರದ ತುಂಡನ್ನು ಬಿಡು ಹಗ್ಗವನ್ನು ಹಿಡಿ’ ‘ಹಗ್ಗ ಸಣ್ಣದು, ಮರ ದೊಡ್ಡದು. ದೊಡ್ದದನ್ನೇ ಹಿಡಿಯಬೇಕು. ನನಗಿಷ್ಟೂ ತಿಳಿಯದೇ ?’ ಎಂದ ಅವನು ಮರವನ್ನೇ ಹಿಡಿದ; ಮರದೊಂದಿಗೆ ಆಳವಾದ ಕೊಳಕ್ಕೆ ಬಿದ್ದು ಮರಣವನ್ನಪ್ಪಿದ. ಧರ್ಮದ ಸೂತ್ರವು ಸಣ್ಣದಾದರೂ ರಕ್ಷಿಸುತ್ತದೆ.